ಹಣಕಾಸು ನೀತಿ ಬಗ್ಗೆ ಮಾಹಿತಿ | Information About Fiscal Policy in Kannada

0
719
ಹಣಕಾಸು ನೀತಿ ಬಗ್ಗೆ ಮಾಹಿತಿ | Information About Fiscal Policy in Kannada
ಹಣಕಾಸು ನೀತಿ ಬಗ್ಗೆ ಮಾಹಿತಿ | Information About Fiscal Policy in Kannada

ಹಣಕಾಸು ನೀತಿ ಬಗ್ಗೆ ಮಾಹಿತಿ Information About Fiscal Policy hanakasu niti bagge mahiti in kannada


Contents

ಹಣಕಾಸು ನೀತಿ ಬಗ್ಗೆ ಮಾಹಿತಿ

Information About Fiscal Policy in Kannada
Information About Fiscal Policy in Kannada

ಈ ಲೇಖನಿಯಲ್ಲಿ ಹಣಕಾಸು ನೀತಿ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

Information About Fiscal Policy in Kannada

ಹಣಕಾಸು ನೀತಿಯು ಆರ್ಥಿಕ ಸ್ಥಿರತೆಯ ಪ್ರಮುಖ ಸಾಧನವಾಗಿದೆ. ಅರ್ಥವ್ಯವಸ್ಥೆಯಲ್ಲಿ ಹಣದ ಬೇಡಿಕೆ ಮತ್ತು ಪೂರೈಕೆಯನ್ನು ನಿಯಂತ್ರಿಸಲು ಆರ್ ಬಿಐ ಅನುಸರಿಸುವ ನೀತಿಯನ್ನು ಹಣಕಾಸು ನೀತಿ ಎನ್ನುವರು.

ಸರಳವಾಗಿ ಆರ್‌ ಬಿಐನ ಪತ್ತು ನಿಯಂತ್ರಣಾ ನೀತಿಯನ್ನು ಹಣಕಾಸು ನೀತಿ ಎನ್ನುತ್ತೇವೆ. ಮುಂದುವರಿದ ರಾಷ್ಟ್ರಗಳಲ್ಲಿ ಆರ್ಥಿಕ ಸ್ಥಿರತೆಯನ್ನು ಸಾಧಿಸುವುದು. ಹಣಕಾಸು ನೀತಿಯ ಪ್ರಮುಖ ಉದ್ದೇಶವಾಗಿದ್ದರೆ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ ಸ್ಥಿರತೆಯೊಂದಿಗೆ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವುದು ಹಣಕಾಸು ನೀತಿಯ ಪ್ರಮುಖ ಉದ್ದೇಶವಾಗಿದೆ.

ಹಣಕಾಸು ನೀತಿಯ ಪ್ರಮುಖ ಉದ್ದೇಶಗಳು

೧. ಅರ್ಥ ವ್ಯವಸ್ಥೆಯಲ್ಲಿ ಆರ್ಥಿಕ ಸ್ಥಿರತೆಯನ್ನು ಸಾಧಿಸುವುದು.

೨. ರಾಷ್ಟ್ರದ ಆರ್ಥಿಕ ಅಭಿವೃದ್ಧಿಯ ಬೆಳವಣಿಗೆ ದರವನ್ನು ಹೆಚ್ಚಿಸುವುದು.

೩. ಉದ್ಯೋಗಾವಕಾಶಗಳನ್ನು ಸೃಷ್ಠಿಸುವುದು.

೪. ವ್ಯಾಪಾರಿ ಚಕ್ರಗಳನ್ನು ನಿಯಂತ್ರಿಸುವುದು.

೫. ವಿದೇಶಿ ವಿನಿಮಯ ದರದಲ್ಲಿ ಸ್ಥಿರತೆಯನ್ನು ಸಾಧಿಸುವುದು.

ಹಣಕಾಸು ನೀತಿ ಸಮಿತಿ

ಭಾರತೀಯ ರಿಸರ್ವ್‌ ಬ್ಯಾಂಕ್‌ ಕಾಯ್ಧೆ-೧೯೩೪ಕ್ಕೆ ೨೦೧೬ರ ಹಣಕಾಸು ಕಾಯ್ದೆಯ ಮೂಲಕ ತಿದ್ದುಪಡಿ ತರಲಾಗಿದೆ. ಆ ಮೂಲಕ ಬೆಳವಣಿಗೆಯನ್ನು ಸಾಧಿಸುವುದರೊಂದಿಗೆ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಹಣಕಾಸು ನೀತಿ ಸಮಿತಿಯ ರಚನೆಗೆ ಶಾಸನ್ಮಾಕ ಮತ್ತು ಸಾಂಸ್ಥಿಕ ಚೌಕಟ್ಟನ್ನು ನೀಡುವುದು ಇದರ ಉದ್ದೇಶವಾಗಿದೆ.

ಹಣಕಾಸು ನೀತಿ ಸಮಿತಿಯು ನಿಗದಿತ ಗುರಿಯ ಮಟ್ಟದಲ್ಲಿ ಹಣದುಬ್ಬರವನ್ನು ನಿಯಂತಿಸಲು ವಿವಿಧ ಮಾನದಂಡಗಳನ್ನು ನಿರ್ಧರಿಸುತ್ತದೆ. ಇದು ಕೈಗೊಳ್ಳುವ ನಿರ್ಧಾರಗಳು ಹೆಚ್ಚು ಪಾರದರ್ಶಕತೆಯಿಂದ ಕೂಡಿದೆ. ಇದು ವರ್ಷದಲ್ಲಿ ಕನಿಷ್ಠ ೪ ಬಾರಿ ಸಭೆಯನ್ನು ಸೇರುತ್ತದೆ.

ಆರ್ ಬಿಐ ಕಾಯ್ದೆಯ ತಿದ್ದುಪಡಿ ಪ್ರಕಾರ ೬ ಸದಸ್ಯರಿಂದ ಕೂಡಿರುತ್ತದೆ. ೬ ಜನರ ಪೈಕಿ ೩ ಜನರನ್ನು ಆರ್‌ ಬಿಐನಿಂದ ನೇಮಕ ಮಾಡಿದರೆ ಇನ್ನುಳಿದ ೩ ಜನರನ್ನು ಸರ್ಕಾರ ನೇಮಕ ಮಾಡುತ್ತದೆ.

ಹಣಕಾಸು ನೀತಿಯ ಸಾಧನಗಳು

ಪರಿಮಾಣಾತ್ಮಕ ವಿಧಾನಗಳು

ಪರಿಮಾಣಾತ್ಮಕ ವಿಧಾನಗಳನ್ನು ನೇರ ಸಾಲ ನಿಯಂತ್ರಣ ವಿಧಾನಗಳು ಎಂದೂ ಸಹ ಕರೆಯಲಾಗುತ್ತದೆ. ಇವುಗಳ ಪರಿಣಾಮ ಸಾರ್ವತ್ರಿಕವಾಗಿರುತ್ತವೆ ಮತ್ತು ಪರಿಣಾಮಕಾರಿಯಾಗಿರುತ್ತವೆ.

೧. ಮುಕ್ತ ಪೇಟೆಯ ಕಾರ್ಯಾಚರಣೆ :

ಆರ್‌ ಬಿಐಯು ಸರ್ಕಾರಿ ಭದ್ರತೆಗಳನ್ನು ಮುಕ್ತವಾಗಿ ಮಾರುವ ಮತ್ತು ಕೊಳ್ಳುವ ಪೇಟೆಯ ಕಾರ್ಯಾಚರಣೆಯನ್ನು ಮುಕ್ತಪೇಟೆಯ ಕಾರ್ಯಾಚರಣೆ ಎನ್ನುತ್ತೇವೆ. ಪ್ರಸ್ತುತ ಆರ್‌ ಬಿಐ ಕಾಯಿದೆಯ ಪ್ರಕಾರ ಆರ್ ಬಿಐ ಸರ್ಕಾರದ ಭದ್ರತೆಗಳನ್ನು ಖಜಾನೆ ಹುಂಡಿಗಳನ್ನು ಮತ್ತು ಇತರ ಪ್ರಮಾಣೀಕೃತ ಭದ್ರತೆಗಳನ್ನು ಕೊಳ್ಳುತ್ತದೆ ಮತ್ತು ಮಾರುತ್ತದೆ. ಆರ್‌ ಬಿಐ ಭದ್ರತೆಗಳನ್ನು ಮಾರುವ ಮೂಲಕ ಅರ್ಥವ್ಯವಸ್ಥೆಯಲ್ಲಿ ದ್ರವ್ಯತ್ವವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಕೊಳ್ಳುವ ಮೂಲಕ ದ್ರವ್ಯತ್ವವನ್ನು ಹೆಚ್ಚಿಸುತ್ತದೆ. ಅಂದರೆ ಆರ್‌ ಬಿಐ ಭದ್ರತೆಗಳನ್ನು ಮಾರಿದ ಸಂದರ್ಭದಲ್ಲಿ ದ್ರವ್ಯತ್ವವು ಕಡಿಮೆಯಾದರೆ ಅವುಗಳನ್ನು ಕೊಳ್ಳುವ ಸಂದರ್ಭದಲ್ಲಿ ದ್ರವ್ಯತ್ವವು ಹೆಚ್ಚಾಗುತ್ತದೆ.

ಹಣದುಬ್ಬರದ ಸಂದರ್ಭದಲ್ಲಿ ಮುಕ್ತ ಪೇಟಿಯಲ್ಲಿ ಭದ್ರತೆಗಳನ್ನು ಮಾರುವ ಮೂಲಕ ದ್ರವ್ಯತ್ವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಅನಪ್ರಸರಣದ ಸಂದರ್ಭದಲ್ಲಿ ಈ ಭದ್ರತೆಗಳನ್ನು ಕೊಳ್ಳುವ ಮೂಲಕ ದ್ರವ್ಯತ್ವವನ್ನು ಹೆಚ್ಚಿಸುತ್ತದೆ. ಸೈದ್ದಾಂತಿಕವಾಗಿ ಮುಕ್ತ ಪೇಟೆಯ ಕಾರ್ಯಾಚರಣೆಯ ಬ್ಯಾಂಕು ದರ ನೀತಿಗಿಂತ ಉತ್ತಮವಾದುದಾಗಿದೆ. ಕಾರಣ ಮುಕ್ತ ಪೇಟೆಯ ಕಾರ್ಯಾಚರಣೆಯಲ್ಲಿ ವಾಣಿಜ್ಯ ಬ್ಯಾಂಕುಗಳ ಸಹಕಾರ ಅಗತ್ಯವಿರುವುದಿಲ್ಲ.

೨. ಬ್ಯಾಂಕು ದರ ನೀತಿ :

ಆರ್‌ ಬಿಐ ಎಲ್ಲಾ ವಾಣಿಜ್ಯ ಬ್ಯಾಂಕ್ ಗಳಿಗೆ ಭದ್ರತೆಗಳನ್ನು ಒಟ್ಟಾಯಿಸುವ ಮೂಲಕ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿಯ ದರವನ್ನು ಬ್ಯಾಂಕುದರ ಎನ್ನುತ್ತೇವೆ. ಭಾರತ ಸರ್ಕಾರ, ರಾಜ್ಯ ಸರ್ಕಾರಗಳು, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಸಹಕಾರಿ ಸಂಘಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಭದ್ರತೆಗಳನ್ನು ವಟ್ಟಾಗಿಸುವ ಮೂಲಕ ಸಾಲವನ್ನು ಪಡೆಯುತ್ತವೆ. ಬ್ಯಾಂಕು ದರವು ಈ ಸಂಸ್ಥೆಗಳು ದೀರ್ಘಾವಧಿಯ ಸಾಲ ಪ್ರವೃತ್ತಿಗಳ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತವೆ.

ಭಾರತದಲ್ಲಿ ಬ್ಯಾಂಕು ದರವು ಹೆಚ್ಚು ಪರಿಣಾಮಕಾರಿಯಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ವಾಣಿಜ್ಯ ಬ್ಯಾಂಕುಗಳು ಆರ್‌ ಬಿಐನ ಮೇಲೆ ಹಣಕಾಸು ನೆರವಿಗಾಗಿ ಅವಲಂಬನೆಯಾಗಿಲ್ಲ ಹಾಗೂ ಅಸಂಘಟಿತ ಹೂಡಿಕೆಗಳ ಮಾರುಕಟ್ಟೆಯ ಕಾರಣದಿಂದ ಅರ್ಹ ಭದ್ರತೆಗಳು ಲಭ್ಯವಿರುವುದಿಲ್ಲ. ಭಾರತದಲ್ಲಿ ಬ್ಯಾಂಕುದರವು ಹೆಚ್ಚು ಪರಿಣಾಮಕಾರಿಯಾದ ಸಾಲ ನಿಯಂತ್ರಣ ಸಾಧನವಾಗಿಲ್ಲ.

೩. ನಗದು ಮೀಸಲು ಅನುಪಾತ :

ಎಲ್ಲಾ ವಾಣಿಜ್ಯ ಬ್ಯಾಂಕುಗಳು ತಮ್ಮ ಒಟ್ಟು ಠೇವಣಿಯ ಒಂದು ಭಾಗವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ನಗದು ರೂಪದಲ್ಲಿ ಕಾಯ್ದಿರಿಸುವುದನ್ನು ನಗದು ಮೀಸಲು ಅನುಪಾತ ಎನ್ನುತ್ತೇವೆ. ಸಿಆರ್‌ ಆರ್‌ ರೂಪದ ನಗದು ಪ್ರಮಾಣವು ಯಾವುದೇ ಬಡ್ಡಿಯನ್ನು ಗಳಿಸುವುದಿಲ್ಲ. ಇದನ್ನು ಕೇಂದ್ರ ಬ್ಯಾಂಕು ಹಣದ ಪೂರೈಕೆ ಮತ್ತು ದ್ರವ್ಯತೆಯನ್ನು ನಿರ್ವಹಿಸುವ ಸಾಧನವಾಗಿ ಬಳಸುತ್ತಾರೆ.

ನಗದು ಮೀಸಲು ಅನುಪಾತವನ್ನು ಹೆಚ್ಚಿಸುವ ಮೂಲಕ ವಾಣಿಜ್ಯ ಬ್ಯಾಂಕುಗಳ ಸಾಲ ವಿಸ್ತರಣೆಯನ್ನು ನಿಯಂತ್ರಿಸಿ ಅರ್ಥವ್ಯವಸ್ಥೆಯಲ್ಲಿ ದ್ರವ್ಯತೆಯನ್ನು ಕಡಿಮೆ ಮಾಡುತ್ತದೆ. ಹಾಗೆಯೇ ನಗದು ಮೀಸಲು ಅನುಪಾತವನ್ನು ಕಡಿಮೆ ಮಾಡುವ ಮೂಲಕ ಅರ್ಥವ್ಯವಸ್ಥೆಯಲ್ಲಿ ದ್ರವ್ಯತೆಯನ್ನು ಹೆಚ್ಚಿಸುತ್ತದೆ. ಆರ್‌ ಬಿಐ ೧೯೪೯ರ ಬ್ಯಾಂಕಿಂಗ್‌ ರೆಗ್ಯೂಲೇಷನ್‌ ಕಾನೂನು ಪ್ರಕಾರ ನಗದು ಮೀಸಲು ಅನುಪಾತವನ್ನು ನಿರ್ಧರಿಸುವ ಅಧಿಕಾರ ಹೊಂದಿದೆ.

೪. ಶಾಸನ ಬದ್ಧ ದ್ರವ್ಯತೆಯ ಅನುಪಾತ :

ವಾಣಿಜ್ಯ ಬ್ಯಾಂಕುಗಳು ತಮ್ಮ ಒಟ್ಟು ಠೇವಣಿಯ ಒಂದು ಭಾಗವನ್ನು ತಮ್ಮ ಬಳಿಯೇ ದ್ರತ್ಯತ್ವದ ರೂಪದಲ್ಲಿ ಹೊಂದುವುದನ್ನು ಶಾಸನ ಬದ್ಧದ್ರವ್ಯತೆಯ ಅನುಪಾತ ಎನ್ನುವರು. ಇದನ್ನು ಚಿನ್ನ ಸರ್ಕಾರದ ಭದ್ರತೆಗಳು ಮತ್ತು ಇತರ ಪ್ರಮಾಣೀಕೃತ ಭದ್ರತೆಗಳ ರೂಪದಲ್ಲಿ ಇಡಲಾಗುತ್ತದೆ. ೧೯೪೯ರ ಬ್ಯಾಂಕಿಂಗ್‌ ರೆಗ್ಯೂಲೇಷನ್‌ ಕಾಯ್ದೆಯ ಪ್ರಕಾರ ಇದನ್ನು ನಿಗಧಿಪಡಿಸುತ್ತದೆ.

೧೯೯೧ರಲ್ಲಿ ನಗದು ಮೀಸಲಿನ ಪ್ರಮಾಣ ಶೇ. ೩೮.೫ರಷ್ಟಿತ್ತು ನರಸಿಂಹನ್‌ ಸಮಿತಿಯು ಇದನ್ನು ವಿರೋಧಿಸಿ ಕಡಿಮೆಗೊಳಿಸಲು ಶಿಫಾರಸ್ಸು ಮಾಡಿತು. ಇದರ ಶಿಫಾರಸ್ಸಿನ ಮೇರೆಗೆ ನಗದು ಮೀಸಲು ಅನುಪಾತದ ಪ್ರಮಾಣವನ್ನು ಶೇ. ೨೫ಕ್ಕೆ ಕಡಿಮೆ ಮಾಡಲಾಯಿತು. ಪ್ರಸ್ತುತ ೨೦೨೧ ಮಾರ್ಚ್ ನಲ್ಲಿ ಶೇ. ೧೮ ರಷ್ಷಿದೆ.

೫. ರೆಪೋ ದರ :

ರಿಸರ್ವ್‌ ಬ್ಯಾಂಕು ಎಲ್ಲಾ ವಾಣಿಜ್ಯ ಬ್ಯಾಂಕ್ ಗಳಿಗೆ ನೀಡುವ ರಾತ್ರೋ ರಾತ್ರಿ ಸಾಲದ ಮೇಲೆ ವಿಧಸುವ ಬಡ್ಡಿ ದರವನ್ನು ರೆಪೋದರ ಎನ್ನುತ್ತೇವೆ. ರೆಪೋದ ವಿಸ್ತೃತ ರೂಪವನ್ನು ಭಾರತದಲ್ಲಿ ಮರುಕೊಳ್ಳುವ ದರ ಎಂದು ಕರೆದರೆ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಟ್ಟಾದರ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಅಲ್ಪಾವಧಿಯ ಸಾಲದ ಮೇಲೆ ವಿಧಿಸುವ ಬಡ್ಡಿಯ ದರವಾಗಿದೆ.

ರಿಸರ್ವ್‌ ಬ್ಯಾಂಕು ರೆಪೋ ದರವನ್ನು ಹೆಚ್ಚಿಸಿದರೆ ವಾಣಿಜ್ಯ ಬ್ಯಾಂಕುಗಳು ನೀಡುವ ಬಡ್ಡಿದರವು ಹೆಚ್ಚಳವಾಗುತ್ತದೆ. ಹಾಗೆಯೇ ರೆಪೋದರವನ್ನು ಕಡಿಮೆ ಮಾಡಿದರೆ ವಾಣಿಜ್ಯ ಬ್ಯಾಂಕುಗಳ ಬಡ್ಡಿಯ ದರವು ಕಡಿಮೆಯಾಗುತ್ತದೆ. ಪ್ರಸ್ತುತ ೨೦೨೧ ಮಾರ್ಚ್ ನಲ್ಲಿ ರೆಪೋದರವು ಶೇ. ೪.೦೦ ರಷ್ಟಿದೆ.

೬. ರಿವರ್ಸ್‌ ರೆಪೊ ದರ :

ರಿಸರ್ವ್‌ ಬ್ಯಾಂಕು ಎಲ್ಲಾ ವಾಣಿಜ್ಯ ಬ್ಯಾಂಕುಗಳಿಂದ ತಾನು ಪಡೆಯುವ ರಾತ್ರೋರಾತ್ರಿ ಸಾಲದ ಮೇಲೆ ನೀಡುವ ಬಡ್ಡಿಯ ದರವನ್ನು ರಿವರ್ಸ್ ರೆಪೋದರ ಎನ್ನುತ್ತೇವೆ. ಇದು ರೆಪೋ ದರಕ್ಕೆ ವಿರುದ್ಧವಾಗಿರುತ್ತದೆ. ಇದನ್ನು ದ್ರವ್ಯತ್ವ ಹೊಂದಾಣಿಕಾ ಸೌಲಭ್ಯದ ಭಾಗವಾಗಿ ೧೯೯೬ ನವೆಂಬರ್ ನಿಂದ ಬಳಸಲಾಗುತ್ತಿದೆ. ಇದನ್ನು ಭಾರತೀಯ ಬ್ಯಾಂಕುಗಳ ಸಾಲ ನೀಡುವ ಪ್ರಮಾಣವನ್ನು ಕಡಿಮೆ ಮಾಡುವ ಪ್ರಮುಖ ಸಾಧನವಾಗಿ ಬಳಸಲಾಗುತ್ತದೆ. ಪ್ರಸ್ತುತ ೨೦೨೧ ಮಾರ್ಚ್‌ ನಲ್ಲಿ ರಿವರ್ಸ್‌ ರೆಪೋ ದರ ಶೇ ೩.೩೫ ನಷ್ಟಿದೆ.

೭. ಸೀಮಾಂತ ಸ್ತಾಯಿ ಸೌಲಭ್ಯಗಳು :

ಇದನ್ನು ರಿವರ್ಸ್‌ ಬ್ಯಾಂಕು ೨೦೧೧-೧೨ರ ಹಣಕಾಸು ನೀತಿಯ ಭಾಗವಾಗಿ ಬಳಸಲಾಯಿತು. ಇದು ೨೦೧೧ ಮೇ ಯಿಂದ ಜಾರಿಗೆ ಬಂದಿದೆ. ಎಂ‌ ಎಸ್ ಎಫ್ ನ ಅಡಿಯಲ್ಲಿ ಬ್ಯಾಂಕುಗಳು ಅರ್ಹ ಸರ್ಕಾರಿ ಸಾಲ ಪತ್ರಗಳ ಆದಾರದ ಮೇಲೆ ಆರ್‌ ಬಿ ಐನಿಂದ ಸಾಲ ಪಡೆಯಬಹುದಾಗಿದೆ. ಇದರ ಮೇಲಿನ ಬಡ್ಡಿ ದರವು ರೆಪೋ ದರಕ್ಕಿಂತ ೦.೨೫ ಹೆಚ್ಚಾಗಿರುತ್ತದೆ. ಪ್ರಸ್ತುತ ೨೦೨೧ ಮಾರ್ಚ್‌ ನಲ್ಲಿ ಎಂಎಸ್‌ ಎಫ್‌ ದರ ಶೇ. ೪.೨೫ ನಷ್ಠಿದೆ.

ಗುಣಾತ್ಮಕ ಸಾಲ ನಿಯಂತ್ರಣ ವಿಧಾನಗಳು

ಗುಣಾತ್ಮಕ ಸಾಲ ನಿಯಂತ್ರಣ ವಿಧಾನಗಳನ್ನು ಆಯ್ದ ಸಾಲ ನಿಯಂತ್ರಣ ವಿಧಾನಗಳು ಎಂದು ಸಹ ಕರೆಯುತ್ತೇವೆ. ಇವುಗಳ ಉದ್ದೇಶ ಉತ್ಪಾದನಾ ಉದ್ದೇಶಕ್ಕೆ ಸಾಲ ಪೊರೈಕೆಯನ್ನು ಹೆಚ್ಚಿಸುವುದು. ಹಾಗೂ ಅನುತ್ಪಾದಕ ಉದ್ದೇಶಗಳಿಗೆ ಸಾಲಗಳನ್ನು ನಿಯಂತ್ರಿಸುವುದು.

೧. ವಾಣಿಜ್ಯ ಬ್ಯಾಂಕುಗಳಿಗೆ ನಿರ್ದೇಶನ :

ಆರ್‌ ಬಿಐ ವಾಣಿಜ್ಯ ಬ್ಯಾಂಕುಗಳಿಗೆ ಲಿಖಿತ ಅಥವಾ ಮೌಖಿಕ ನಿರ್ದೇಶನಗಳನ್ನು ನೀಡಬಹುದು. ವಾಣಿಜ್ಯ ಬ್ಯಾಂಕುಗಳು ಸಾಲ ನೀಡುವಲ್ಲಿ ಮೃದು ಅಥವಾ ಕಠಿಣ ನೀತಿ ಅನುಸರಿಸಲು ಮಾರ್ಗದರ್ಶನ ನೀಡುತ್ತದೆ.

೨. ಅಂಚಿನ ಅಗತ್ಯತೆ ನಿರ್ಧಾರ :

ವಾಣಿಜ್ಯ ಬ್ಯಾಂಕುಗಳು ಕೆಲವು ಭದ್ರತೆಗಳನ್ನು ಆಧಾರವಾಗಿಟ್ಟುಕೊಂಡು ಅದರ ಆಧಾರದ ಮೇಲೆ ಸಾಲವನ್ನು ನೀಡುತ್ತದೆ. ಬ್ಯಾಂಕುಗಳು ನೀಡುವ ಸಾಲವು ಭದ್ರತೆಗಳ ಮಾರುಕಟ್ಟೆ ಮೌಲ್ಯವನ್ನು ಅನುಸರಿಸಿ ಸಾಲ ನೀಡುತ್ತವೆ. ಹೀಗೆ ಭದ್ರತೆ ಇಟ್ಟಿರುವ ವಸ್ತುವಿನ ಮಾರುಕಟ್ಟೆ ಮೌಲ್ಯ ಮತ್ತು ಇಂತಹ ಭದ್ರತೆ ಆಧಾರದ ಮೇಲೆ ನೀಡಲಾದ ಸಾಲಗಳ ಮೊತ್ತದ ನಡುವಿನ ವ್ಯತ್ಯಾಸವನ್ನು ಅಂಚಿನ ಅಗತ್ಯತೆ ಎನ್ನುತ್ತೇವೆ. ಕೇಂದ್ರ ಬ್ಯಾಂಕು ಸಾಲವನ್ನು ನಿಯಂತ್ರಿಸುವ ಸಲುವಾಗಿ ಅಂಚಿನ ಅಗತ್ಯತೆಯನ್ನು ಕಾಲಕಾಲಕ್ಕೆ ಬದಲಾಯಿಸುತ್ತಿರುತ್ತದೆ.

೩. ನೈತಿಕ ಒತ್ತಡ :

ಆರ್‌ ಬಿಐಯು ವಾಣಿಜ್ಯ ಬ್ಯಾಂಕುಗಳು ಸಾಲ ನೀಡುವ ಸಂದರ್ಭದಲ್ಲಿ ವಾಣಿಜ್ಯ ಬ್ಯಾಂಕುಗಳ ಮನವೊಲಿಸುವುದು. ಅಂದರೆ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗದ ಹಣದುಬ್ಬರವನ್ನು ಹೆಚ್ಚಿಸುವಂತಹ ಅನುತ್ಪಾದಕ ಉದ್ದೇಶಗಳಿಗೆ ಸಾಲವನ್ನು ನೀಡದಂತೆ ಮನವೊಲಿಸುವುದಾಗಿದೆ.

೪. ಅನುಭೋಗಿ ಸಾಲನಿಯಂತ್ರಣ :

ಬೆಲೆಬಾಳುವಂತಹ ವಸ್ತುಗಳಾದ ಕಾರು, ಟಿವಿ, ವಾಷಿಂಗ್‌ ಮೆಶಿನ್‌, ಪೀಠೋಪಕರಣ ಮುಂತಾದವುಗಳನ್ನು ಖರೀದಿಸಲು ಸಾಲ ನೀಡುವುದನ್ನು ಅನುಬೋಗಿ ಸಾಲಗಳೆನ್ನುತ್ತೇವೆ. ಇಂತಹ ವಸ್ತುಗಳ ಅತಿಯಾದ ಬೇಡಿಕೆಯು ಹಣದುಬ್ಬರಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆಗಳನ್ನು ಬಗೆಹರಿಸಲು ಆರ್‌ ಬಿಐಯು ಅನುಬೋಗಿ ಸಾಲವನ್ನು ನಿಯಂತ್ರಿಸಲು ಅಂಚಿನ ಅಗತ್ಯತೆಯನ್ನು ಹೆಚ್ಚಿಸಬಹುದು. ಸಾಲ ಮರುಪಾವತಿ ಅವಧಿಯನ್ನು ಕಡಿಮೆ ಮಾಡಬಹುದು ಅಥವಾ ಇಂತಹ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಿಸಬಹುದು.

೫. ಸಾಲ ಪಡಿತರ :

ವಾಣಿಜ್ಯ ಬ್ಯಾಂಕುಗಳು ನಿರ್ದಿಷ್ಟ ಮೊತ್ತದವರೆಗೆ ಮಾತ್ರ ಸಾಲ ನೀಡಬಹುದೆಂದು ರಿಸರ್ವ್‌ ಬ್ಯಾಂಕು ಸೂಚನೆ ನೀಡುತ್ತದೆ ಮತ್ತು ಪ್ರತಿಯೊಂದು ವಾಣಿಜ್ಯ ಬ್ಯಾಂಕ್‌ ನೀಡುವ ಸಾಲಗಳು ಹಾಗೂ ಮುಂಗಡಗಳ ಗರಿಷ್ಠ ಮಿತಿಯನ್ನು ರಿಸರ್ವ್‌ ನಿರ್ಧರಿಸುವುದಾಗಿದೆ.

೬. ನೇರ ಕ್ರಮ :

ಇದು ವಾಣಿಜ್ಯ ಬ್ಯಾಂಕುಗಳ ವಿರುದ್ಧ ಕೇಂದ್ರ ಬ್ಯಾಂಕ್‌ ಒತ್ತಾಯಪೂರ್ವಕವಾಗಿ ಕೈಗೊಳ್ಳುವ ಕ್ರಮವಾಗಿದೆ. ಕೇಂದ್ರ ಬ್ಯಾಂಕ್‌ ವಾಣಿಜ್ಯ ಬ್ಯಾಂಕುಗಳ ಭದ್ರತೆಗಳನ್ನು ಮರುವಟ್ಟಾಯಿಸುವುದನ್ನು ಅಥವಾ ಮುಂಗಡ ನೀಡುವುದನ್ನು ತಿರಸ್ಕರಿಸಬಹುದು ಹಾಗೂ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪಡೆದ ದಂಡ ರೂಪದ ಬಡ್ಡಿ ವಿಧಿಸಬಹುದು.

೭. ಪ್ರಚಾರ :

ಸಾಲ ಹಾಗೂ ವ್ಯಾಪಾರ ಸ್ಥಿತಿಗತಿಗಳಿಗೆ ಸಂಬಂಧಿಸಿದಂತೆ ಮಾಸಿಕ ಪ್ರಕಟಣೆಗಳು ಮತ್ತು ಬ್ಯಾಂಕಿಂಗ್‌ ಹಾಗೂ ವ್ಯಾಪಾರ ವ್ಯವಹಾರಕ್ಕೆ ಕುರಿತಾದ ವಾರ್ಷಿಕ ವರದಿಯನ್ನು ಹೊರಡಿಸುವುದು. ಹೀಗೆ ಪ್ರಚಾರ ಕಾರ್ಯದಿಂದ ಸಾಲ ನಿಯಂತ್ರಣ ಕುರಿತು ವಾಣಿಜ್ಯ ಬ್ಯಾಂಕುಗಳಿಗೆ ಮಾಹಿತಿ ನೀಡುತ್ತದೆ.

FAQ

ಭಾರತದಲ್ಲಿ ಸ್ಥಾಪನೆಯಾದ ಮೊದಲ ಬ್ಯಾಂಕ್‌ ಯಾವುದು?

ಬ್ಯಾಂಕ್‌ ಆಫ್‌ ಹಿಂದೂಸ್ತಾನ್.

ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ಬ್ಯಾಂಕ್ ಯಾವುದು?

ಭಾರತೀಯ ಸ್ಟೇಟ್‌ ಬ್ಯಾಂಕ್.

ಇತರೆ ವಿಷಯಗಳು :

ಅಭಿವೃದ್ಧಿ ಬಗ್ಗೆ ಮಾಹಿತಿ

ಬ್ಯಾಂಕು ವ್ಯವಹಾರಗಳ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here