ರಾಷ್ಟ್ರೀಯ ಗ್ರಾಹಕರ ಹಕ್ಕು ದಿನ ಬಗ್ಗೆ ಪ್ರಬಂಧ | Essay On National Consumer Rights Day In Kannada

0
839
ರಾಷ್ಟ್ರೀಯ ಗ್ರಾಹಕರ ಹಕ್ಕು ದಿನ ಬಗ್ಗೆ ಪ್ರಬಂಧ | Essay On National Consumer Rights Day In Kannada
ರಾಷ್ಟ್ರೀಯ ಗ್ರಾಹಕರ ಹಕ್ಕು ದಿನ ಬಗ್ಗೆ ಪ್ರಬಂಧ | Essay On National Consumer Rights Day In Kannada

ರಾಷ್ಟ್ರೀಯ ಗ್ರಾಹಕರ ಹಕ್ಕು ದಿನ ಬಗ್ಗೆ ಪ್ರಬಂಧ Essay On National Consumer Rights Rashtriya Grahakra Dina Prabandha in Kannada


Contents

ರಾಷ್ಟ್ರೀಯ ಗ್ರಾಹಕರ ಹಕ್ಕು ದಿನ ಬಗ್ಗೆ ಪ್ರಬಂಧ

Essay On National Consumer Rights Day In Kannada
Essay On National Consumer Rights Day In Kannada

ಈ ಲೇಖನಿಯಲ್ಲಿ ರಾಷ್ಟ್ರೀಯ ಗ್ರಾಹಕರ ಹಕ್ಕು ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ಆಧುನಿಕ ಮಾರುಕಟ್ಟೆ ಸಿದ್ಧಾಂತವು ಗ್ರಾಹಕನನ್ನು ಮಾರುಕಟ್ಟೆಯ ‘ರಾಜ’ನೆಂದು ಪರಿಗಣಿಸಿದೆ. ಮಾರುಕಟ್ಟೆಯ ಎಲ್ಲಾ ಕಾರ್ಯಚಟುವಟಿಕೆಗಳು ಗ್ರಾಹಕನ ಅವಶ್ಯಕತೆಗಳು ಮತ್ತು ಅಭಿಲಾಷೆಗಳನ್ನು ತೃಪ್ತಿಪಡಿಸುವ ಉದ್ದೇಶವನ್ನು ಹೊಂದಿದೆ. ಆದರೆ, ವ್ಯವಹಾರ ಸಂಘಟನೆಗಳು ಹೆಚ್ಚುತ್ತಿರುವ ಪೈಪೋಟಿ, ಮಾರಾಟದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಹಾಗೂ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಅನುಚಿತ ವ್ಯಾಪಾರ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತಪ್ಪು ಮಾಹಿತಿ ನೀಡುವ ಜಾಹಿರಾತು, ಮುಂತಾದವುಗಳಿಂದ ಗ್ರಾಹಕರನ್ನು ವಂಚಿಸುತ್ತಿದ್ದು, ಅವನ ರಕ್ಷಣೆ ಅತ್ಯಗತ್ಯವಾಗಿದೆ.

ವಿಷಯ ವಿವರಣೆ

ಹಣವನ್ನು ಪಾವತಿಸಿ ಅಥವಾ ಪಾವತಿಸುವ ವಾಗ್ದಾನದ ಮೇರೆಗೆ ಸರಕು ಅಥವಾ ಸೇವೆಗಳನ್ನು ಸ್ವಂತ ಅಥವಾ ಅನ್ಯರ ಉಪಯೋಗಕ್ಕಾಗಿ ಖರೀದಿಸುವವನನ್ನು ಗ್ರಾಹಕ ಎಂದು ಕರೆಯುತ್ತಾರೆ. ಆದರೆ ವ್ಯವಹಾರ ಉದ್ದೇಶಗಳಿಗೆ (ಮರು ಮಾರಾಟ) ಸರಕು ಮತ್ತು ಸೇವೆಗಳನ್ನು ಖರೀದಿಸುವವನು ಗ್ರಾಹಕನಾಗುವುದಿಲ್ಲ. ಈ ದಿನವು ಡಿಸೆಂಬರ್ 24, 1986 ರಂದು ಗ್ರಾಹಕ ಸಂರಕ್ಷಣಾ ಕಾಯಿದೆಯು ಭಾರತದ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದ ದಿನಾಂಕವನ್ನು ಸ್ಮರಿಸುತ್ತದೆ. ಗ್ರಾಹಕರು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವುದು ದಿನದ ಉದ್ದೇಶವಾಗಿದೆ. ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ವಾರ್ಷಿಕವಾಗಿ ಮಾರ್ಚ್ 15 ರಂದು ಆಚರಿಸಲಾಗುತ್ತದೆ.

ಗ್ರಾಹಕರ ಹಕ್ಕುಗಳು (Rights of Consumers)

೧. ಸುರಕ್ಷತೆಯ ಹಕ್ಕು (Right to Safety)

ಗ್ರಾಹಕರ ಆರೋಗ್ಯ ಹಾಗೂ ಜೀವಕ್ಕೆ ಹಾನಿಯನ್ನುಂಟು ಮಾಡುವ ಉತ್ಪಾದನಾ ಮತ್ತು ಇತರೆ ನ್ಯೂನತೆಗಳನ್ನು ಹೊಂದಿರುವ ಆಹಾರ ವಸ್ತುಗಳು, ಔಷಧಿ, ವಿದ್ಯುತ್ ಉಪಕರಣಗಳು, ಗ್ಯಾಸ್ ಸಿಲಿಂಡರ್’ಗಳು, ಕುಕ್ಕರ್‌ಗಳಿಂದ ರಕ್ಷಣೆಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

೨. ಮಾಹಿತಿ ಪಡೆಯುವ ಹಕ್ಕು (Right to be informed)

ಗ್ರಾಹಕರು ತಾವು ಖರೀದಿಸಲು ಇಚ್ಛಿಸುವ ಸರಕುಗಳ ಬಗ್ಗೆ ಅಂದರೆ ಸರಕಿನ ಪ್ರಮಾಣ, ಗುಣಮಟ್ಟ, ಬೆಲೆ, ಉತ್ಪಾದನೆ ಹಾಗೂ ವಾಯಿದೆ ದಿನಾಂಕ ಮುಂತಾದವುಗಳ ಬಗ್ಗೆ ನೈಜ ಹಾಗೂ ಸಂಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

೩. ಆಯ್ಕೆಯ ಹಕ್ಕು (Right to choose)

ಮಾರಾಟಗಾರ ನಿರ್ದಿಷ್ಟ ವಸ್ತುಗಳನ್ನು ಖರೀದಿಸುವಂತೆ ಒತ್ತಾಯಪೂರ್ವಕ ಕ್ರಮಗಳನ್ನು ಕೈಗೊಂಡರೂ ವೈವಿಧ್ಯಮಯ ಸರಕುಗಳಲ್ಲಿ ತಮ್ಮ ಅಗತ್ಯಕ್ಕನುಗುಣವಾದ ಸರಕುಗಳನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಗ್ರಾಹಕರು ಹೊಂದಿರುತ್ತಾರೆ.

೪. ಆಲಿಸುವ ಹಕ್ಕು (Right to be heard)

ಗ್ರಾಹಕರು ಶೋಷಣೆಗೆ ಒಳಗಾಗಿದ್ದಲ್ಲಿ ಅಥವಾ ಖರೀದಿಸಿದ ಸರಕು ಅಥವಾ ಸೇವೆಗಳಿಂದ ಅತೃಪ್ತಿಯನ್ನು ಹೊಂದಿದ್ದಲ್ಲಿ ಸಂಬಂಧಿಸಿದ ಗ್ರಾಹಕ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ. ಅದೇ ರೀತಿ ಅನೇಕ ವ್ಯವಹಾರ ಸಂಸ್ಥೆಗಳು ತಮ್ಮದೇ ಆದ ಸೇವಾ ಹಾಗೂ ಕುಂದುಕೊರತೆಗಳನ್ನು ನಿವಾರಿಸುವ ಕೇಂದ್ರಗಳನ್ನು ಸ್ಥಾಪಿಸುವುದರ ಮೂಲಕ ಗ್ರಾಹಕರ ಸಮಸ್ಯೆಯನ್ನು ಆಲಿಸುತ್ತಿವೆ.

೫. ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವ ಹಕ್ಕು (Right to seek Redressal)

ಗ್ರಾಹಕರು ತಾವು ಖರೀದಿಸಿದ ವಸ್ತುಗಳಲ್ಲಿ ದೋಷಗಳಿದ್ದಲ್ಲಿ ಅಥವಾ ಪಡೆಯುವ ಸೇವೆಗಳಲ್ಲಿ ನ್ಯೂನತೆಗಳಿದ್ದಲ್ಲಿ ಅವುಗಳಿಗೆ ಪರಿಹಾರಗಳನ್ನು ಬದಲಿ ವಸ್ತುಗಳನ್ನು ಪಡೆಯುವ ಅಥವಾ ದೋಷಗಳನ್ನು ನಿವಾರಿಸಿಕೊಳ್ಳುವ ಹಾಗೂ ಸರಕುಗಳ ಖರೀದಿಯಿಂದಾದ ನಷ್ಟವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

೬. ಗ್ರಾಹಕರ ಶಿಕ್ಷಣದ ಹಕ್ಕು (Right to educate)

ಗ್ರಾಹಕರು ಸರಕು ಮತ್ತು ಸೇವೆಗಳನ್ನು ಉಪಯೋಗಿಸುವ ಸಂದರ್ಭದಲ್ಲಿ ಸಂಪೂರ್ಣ ಜ್ಞಾನ ಹಾಗೂ ಪರಿಣಿತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಅದೇ ರೀತಿ ವ್ಯಾಪಾರಿ ಸಂಸ್ಥೆಗಳ ಅನುಚಿತ ವ್ಯಾಪಾರಿ ಪದ್ಧತಿಗಳಿಂದ ರಕ್ಷಣೆ ಪಡೆಯಲು ಸೂಕ್ತ ಕಾನೂನುಗಳು ಅಸ್ತಿತ್ವದಲ್ಲಿರುವುದರ ಬಗ್ಗೆ ಹಾಗೂ ತಮಗೆ ದೊರೆಯುವ ವಿವಿಧ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

ಗ್ರಾಹಕರ ಜವಾಬ್ದಾರಿಗಳು (Consumer Responsibility)

ಗ್ರಾಹಕರು ತಾವು ಪಡೆಯುತ್ತಿರುವ ಹಕ್ಕುಗಳೊಂದಿಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಹಕ್ಕುಗಳು ಮತ್ತು ಜವಾಬ್ದಾರಿಗಳು ಒಂದೇ ನಾಣ್ಯದ ಎರಡು ಮೂಖಗಳಾಗಿವೆ. ಗ್ರಾಹಕರ ಜವಾಬ್ದಾರಿಗಳು ಕೆಳಕಂಡಂತಿವೆ :

೧. ಹಕ್ಕುಗಳ ಬಗ್ಗೆ ಜಾಗೃತಿ (Awareness of Rights)

ಗ್ರಾಹಕರು ಸರಕು ಮತ್ತು ಸೇವೆಗಳನ್ನು ಖರೀದಿಸುವ ಸಂದರ್ಭದಲ್ಲಿ ತಮಗೆ ದೊರೆಯುವ ಹಕ್ಕುಗಳಾದ ಸುರಕ್ಷತೆ, ಮಾಹಿತಿ ಪಡೆಯುವ ಹಾಗೂ ಇತರೆ ಹಕ್ಕುಗಳ ಬಗ್ಗೆ ಸಂಪೂರ್ಣ ಜಾಗೃತಿಯನ್ನು ಹೊಂದಿರಬೇಕು.

೨. ಗುಣಮಟ್ಟದ ಅರಿವು (Quality conscious)

ಗ್ರಾಹಕರು ತಾವು ಸರಕುಗಳನ್ನು ಖರೀದಿಸುವ ಸಂದರ್ಭದಲ್ಲಿ ಗುಣಮಟ್ಟ ನಿರ್ಧರಿಸಿದ ಬಿ.ಐ.ಎಸ್, ಅಗ್-ಮಾರ್ಕ್, ಹಾಲ್-ಮಾರ್ಕ್, ಇತ್ಯಾದಿಗಳ ಬಗ್ಗೆ ಅರಿವನ್ನು ಹೊಂದಿರಬೇಕು.

೩. ದೂರು ನೀಡಲು ಸಿದ್ಧರಿರಬೇಕು (Ready to lodge complaint)

ಗ್ರಾಹಕರು ತಾವು ಖರೀದಿಸಿದ ಸರಕು ಅಥವಾ ಸೇವೆಗಳಲ್ಲಿ ನ್ಯೂನತೆಗಳಿದ್ದಲ್ಲಿ ಅದರ ಮೌಲ್ಯವನ್ನು ಪರಿಗಣಿಸದೇ ಸಂಬಂಧಿಸಿದ ಗ್ರಾಹಕ ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ.

೪. ತಪ್ಪು ಜಾಹೀರಾತುಗಳಿಂದ ದಿಕ್ಕು ತಪ್ಪಬಾರದು (Not to be misled by false advertisements)

ಸಾಮಾನ್ಯವಾಗಿ ಉತ್ಪಾದಕ/ಮಾರಾಟಗಾರ ಜಾಹೀರಾತಿನಲ್ಲಿ ತಪ್ಪು ಮಾಹಿತಿಗಳನ್ನು ನೀಡುವುದರ ಮೂಲಕ ಸರಕುಗಳ ಗುಣಮಟ್ಟವನ್ನು ವಾಸ್ತವಕ್ಕಿಂತ ಹೆಚ್ಚಾಗಿದೆಯೆಂದು ಬಿಂಬಿಸುತ್ತಾನೆ. ಆದರೆ, ಗ್ರಾಹಕರು ನೈಜ ಗುಣವನ್ನು ಪರಿಶೀಲಿಸಿ, ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ತಪ್ಪು ಮಾಹಿತಿಯ ಜಾಹಿರಾತಿನಿಂದ ರಕ್ಷಣೆಯನ್ನು ಪಡೆಯುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

೫. ನಗದು ರಶೀದಿಗಾಗಿ ಬೇಡಿಕೆ (Demand for Cash memo)

ಗ್ರಾಹಕರು ತಾವು ಖರೀದಿಸಿದ ಸರಕು ಮತ್ತು ಸೇವೆಗಳ ಪುರಾವೆಗಾಗಿ ನಗದು ರಶೀದಿಯನ್ನು ಕೇಳಿ ಪಡೆಯಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಖರೀದಿದಾರ ನಗದು ರಶೀದಿಯನ್ನು ಅಪೇಕ್ಷಿಸದೇ ಇದ್ದರೂ ಅದನ್ನು ನೀಡುವುದು ಮಾರಾಟಗಾರನ ಆದ್ಯ ಕರ್ತವ್ಯವಾಗಿರುತ್ತದೆ.

೬. ಜಾಗೃತ ಬಳಕೆದಾರ (Cautious Consumer)

ಗ್ರಾಹಕರು ತಾವು ಸರಕು ಮತ್ತು ಸೇವೆಗಳನ್ನು ಖರೀದಿಸುವ ಸಂದರ್ಭದಲ್ಲಿ ಅದರ ಸ್ವಭಾವ, ಬೆಲೆ, ತಯಾರಿಕೆಯ ಮತ್ತು ವಾಯಿದೆಯ ದಿನಾಂಕ, ಸರಕುಗಳನ್ನು ಉಪಯೋಗಿಸುವ ಬಗ್ಗೆ ನಿರ್ದೇಶನ ಮತ್ತು ಸರಕುಗಳನ್ನು ಉಪಯೋಗಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ ಜಾಗರೂಕರಾಗಿರಬೇಕಾಗುತ್ತದೆ.

೭. ಸರಕುಗಳ ಆಯ್ಕೆ (Selection of Goods)

ಗ್ರಾಹಕರು ಕಾನೂನುಬದ್ಧ ಸರಕು ಮತ್ತು ಸೇವೆಗಳನ್ನು ಖರೀದಿಸಬೇಕು. ಕಳ್ಳಸಾಗಾಣಿಕೆ, ಕಾಳಸಂತೆಯ ಸರಕುಗಳನ್ನು ಖರೀದಿಸಬಾರದು.

೮. ಗ್ರಾಹಕ ಸಂಘಟನೆ

ಗ್ರಾಹಕರು ಉತ್ಪಾದಕ/ಮಾರಾಟಗಾರರ ಅನೈತಿಕ ವ್ಯಾಪಾರಿ ಪದ್ಧತಿಗಳಿಂದ ರಕ್ಷಣೆ ಪಡೆಯಲು ತಮ್ಮದೇ ಆದ ಗ್ರಾಹಕ ಸಂಘಟನೆಗಳನ್ನು ಸ್ಥಾಪಿಸಿಕೊಳ್ಳಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ.

೯. ಪರಿಸರ ರಕ್ಷಣೆ (Protection of Environment)

ಗ್ರಾಹಕರು ಸಂಪನ್ಮೂಲಗಳನ್ನು ಅನುಪಯುಕ್ತಗೊಳಿಸದೇ ಪರಿಸರದ ಬಗ್ಗೆ ಗೌರವ ಹಾಗೂ ರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ.

೧೦. ಅವಸರದಲ್ಲಿ ಖರೀದಿಸಬಾರದು (Not to buy in hurry)

ಗ್ರಾಹಕರು ಅವಸರದಿಂದ ಯಾವುದೇ ಸರಕು ಮತ್ತು ಸೇವೆಯನ್ನು ಖರೀದಿಸಬಾರದು ಮತ್ತು ಖರೀದಿಸುವ ಸಂದರ್ಭದಲ್ಲಿ ಅವುಗಳ ಗುಣಮಟ್ಟ, ಪ್ರಮಾಣ, ಬೆಲೆ, ಖರೀದಿಯ ಸಮಯ ಮುಂತಾದವುಗಳ ಬಗ್ಗೆ ಸುದೀರ್ಘವಾಗಿ ಯೋಚಿಸಿ ಖರೀದಿಸಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾನೆ.

ಉಪಸಂಹಾರ

ಈ ಕಾಯ್ದೆಯನ್ನು ಗ್ರಾಹಕರ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ ೧೯೮೬ ರಲ್ಲಿ ಜಾರಿಗೆ ತರಲಾಯಿತು. ಇದು ದೋಷಪೂರಿತ ವಸ್ತುಗಳು, ಅತೃಪ್ತಿದಾಯಕ ಸೇವೆಗಳು, ಅನುಚಿತ ವ್ಯಾಪಾರಿ ಪದ್ಧತಿಗಳು ಹಾಗೂ ಇತರೆ ಶೋಷಣೆಯ ವಿರುದ್ಧ ಪರಿಣಾಮಕಾರಿ ರಕ್ಷಣೆಯನ್ನು ಗ್ರಾಹಕರಿಗೆ ನೀಡುವ ಉದ್ದೇಶವನ್ನು ಹೊಂದಿದೆ. ಈ ಕಾಯ್ದೆ ಸರಕು ಮತ್ತು ಸೇವೆಗಳ ವಿರುದ್ಧ ದೂರುಗಳಿದ್ದಲ್ಲಿ ಇತ್ಯರ್ಥಪಡಿಸಲು ಕಾಲಮಿತಿಯ ಷರತ್ತನ್ನು ವಿಧಿಸಿದೆ. ಈ ಕಾನೂನು ಶೀಘ್ರ ಹಾಗೂ ಮಿತವ್ಯಯಕಾರಿಯಾಗಿ ದೂರುಗಳನ್ನು ಇತ್ಯರ್ಥಪಡಿಸುವ ಉದ್ದೇಶವನ್ನು ಹೊಂದಿದೆ. ಗ್ರಾಹಕರ ಶೋಷಣೆಯ ವಿರುದ್ಧ ಕೇವಲ ಬಿಳಿಹಾಳೆಯಲ್ಲಿ ದೂರನ್ನು ಸಲ್ಲಿಸಬಹುದಾಗಿದೆ. ಈ ಕಾನೂನಿನನ್ವಯ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಹಾಗೂ ರಾಜ್ಯಮಟ್ಟದಲ್ಲಿ ಗ್ರಾಹಕ ಹಿತರಕ್ಷಣಾ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಈ ಮಂಡಳಿಗಳು ಗ್ರಾಹಕರಿಗೆ ಸೂಕ್ತ ಶಿಕ್ಷಣವನ್ನು ನೀಡುವುದರ ಮೂಲಕ ಅವರ ಹಿತರಕ್ಷಣೆಯನ್ನು ಕಾಪಾಡುತ್ತಿದೆ.

FAQ

ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಯಾವಾಗ ಆಚರಿಸುತ್ತಾರೆ ?

ಡಿಸೆಂಬರ್‌ ೨೪ ರಂದು

ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಯಾವಾಗ ಆಚರಿಸುತ್ತಾರೆ ?

ಮಾರ್ಚ್‌ ೧೫

ಇತರೆ ವಿಷಯಗಳು :

ಮಾನವ ಹಕ್ಕುಗಳ ದಿನಾಚರಣೆ ಬಗ್ಗೆ ಪ್ರಬಂಧ 

ರಾಷ್ಟ್ರೀಯ ಗಣಿತ ದಿನ ಬಗ್ಗೆ ಪ್ರಬಂಧ 

LEAVE A REPLY

Please enter your comment!
Please enter your name here